ಈ ದೇವಾಲಯದ ಸ್ಥಿತಿ ನೋಡಿದ್ರೆ ಬೇಜಾರಾಗುತ್ತೆ.. ದೊಡ್ಡಕಣಗಾಲು ರಾಮೇಶ್ವರ Rameshvara Doddakanagalu

แชร์
ฝัง
  • เผยแพร่เมื่อ 8 ต.ค. 2024
  • #justkannadiga #karnatakahistoricalplaces #karnataka #history #tourism
    ದೊಡ್ಡಕಣಗಾಲು ಗ್ರಾಮವು ಜಿಲ್ಲಾ ಕೇಂದ್ರ ಹಾಸನದಿಂದ ಸುಮಾರು 12 ಕಿ ಮೀ ಮತ್ತು ತಾಲೂಕು ಕೇಂದ್ರ ಆಲೂರಿನಿಂದ ಸುಮಾರು 6 ಕಿ ಮೀ ದೂರದಲ್ಲಿದೆ. ಈ ಗ್ರಾಮದಲ್ಲಿ ನಾಲ್ಕು ಹೊಯ್ಸಳ ದೇವಾಲಯಗಳಿದ್ದರೂ ಇವು ಯಾರ ಗಮನಕ್ಕೂ ಸಹ ಬರದೇ ಮರೆಯಾಗಿವೆ. ಯಾವುದೇ ಪುಸ್ತಕದಲ್ಲಿಯೂ ಸಹ ಈ ದೇವಾಲಯಗಳ ಮಾಹಿತಿ ದಾಖಲಾಗದೆ ಇರುವುದು ಅಚ್ಚರಿಯೆನಿಸುತ್ತದೆ. ಇದೇ ಗ್ರಾಮದ ಸುತ್ತಮುತ್ತ ಇರುವ ಬಂಡಿತಿಮ್ಮನಹಳ್ಳಿ, ಹುಣಸವಳ್ಳಿ, ಉಮ್ಮದೇವರಹಳ್ಳಿಗಳಲ್ಲಿಯೂ ಸಹ ಹೊಯ್ಸಳರ ಕಾಲದ ದೇವಾಲಯಗಳಿರುವುದನ್ನು ನೋಡಬಹುದು. ಪ್ರಸ್ತುತ ದೊಡ್ಡಕಣಗಾಲು ಗ್ರಾಮದಲ್ಲಿ ಚನ್ನಕೇಶವ, ಕಾಳಹಸ್ತೇಶ್ವರ, ಕಲ್ಲೇಶ್ವರ ಮತ್ತು ಮಲ್ಲೇಶ್ವರ ಎಂಬ ನಾಲ್ಕು ಹೊಯ್ಸಳ ದೇವಾಲಯಗಳಿವೆ. ಇವಲ್ಲದೇ ಗ್ರಾಮದಲ್ಲಿ ಕೆಲವು ಶಾಸನಗಳು ಮತ್ತು ವೀರಗಲ್ಲುಗಳನ್ನು ಸಹ ಕಾಣಬಹುದಾಗಿದೆ.
    ದೊಡ್ಡಕಣಗಾಲು ಗ್ರಾಮವು ಹೊಯ್ಸಳರ ನಂತರ ವಿಜಯನಗರ ಅರಸರ ಸಾಮಂತರಾದ ನಾಯಕರ ಆಳ್ವಿಕೆಗೆ ಒಳಪಟ್ಟಿದ್ದಾಗಿ ಇಲ್ಲಿನ ಶಾಸನಗಳಿಂದ ತಿಳಿಯುತ್ತದೆ. ಆದರೆ ಹೊಯ್ಸಳರ ಕಾಲಕ್ಕೇನೇ ದೊಡ್ಡಕಣಗಾಲು ಗ್ರಾಮವು ಉಚ್ಛ್ರಾಯ ಸ್ಥಿತಿಯಲ್ಲಿದ್ದು ಇದೊಂದು ಮಹಾ ಅಗ್ರಹಾರವಾಗಿದ್ದಾಗಿ ತಿಳಿಯುತ್ತದೆ. ಇಲ್ಲಿ ನಾಲ್ಕು ದೇವಾಲಯಗಳು ನಿರ್ಮಾಣವಾಗಿದೆಯೆಂದರೆ ಇದು ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ಮತ್ತು ರಾಜಕೀಯವಾಗಿ ಬಹಳ ಪ್ರಾಮುಖ್ಯತೆಯನ್ನು ಪಡೆದ ಸ್ಥಳವಾಗಿತ್ತೆಂದು ಊಹಿಸಬಹುದು. ಅಗ್ರಹಾರದ ರಚನೆಯಂತೆ ಗ್ರಾಮದ ಮಧ್ಯದಲ್ಲಿ ಚನ್ನಕೇಶವನ ದೇವಾಲಯವಿದ್ದು ಗ್ರಾಮದ ಹೊರವಲಯದಲ್ಲಿ ಕಾಳಹಸ್ತೇಶ್ವರ ದೇವಾಲಯವಿದೆ.
    ಹೊಯ್ಸಳರ ಕಾಲದ ಯಾವುದೇ ಗ್ರಾಮದಲ್ಲಿ ಒಂದು ವೈಷ್ಣವ ಮತ್ತು ಒಂದು ಶೈವ ದೇವಾಲಯವಿರುವುದು ಸಾಮಾನ್ಯವಾದರೂ ದೊಡ್ಡಕಣಗಾಲು ಗ್ರಾಮದ ಈಶಾನ್ಯ ದಿಕ್ಕಿನಲ್ಲಿ ಕೆರೆಯ ಬಳಿ ಮಲ್ಲೇಶ್ವರ ಮತ್ತು ಕಲ್ಲೇಶ್ವರ ಎಂಬ ಎರಡು ಪ್ರತ್ಯೇಕ ಶೈವ ದೇವಾಲಯಗಳಿವೆ. ಪ್ರಸ್ತುತ ಈ ಎರಡೂ ದೇವಾಲಯಗಳು ಪಾಳುಬಿದ್ದ ಸ್ಥಿತಿಯಲ್ಲಿವೆ.
    ಕಲ್ಲೇಶ್ವರ ದೇವಾಲಯವು ದ್ವಿಕೂಟ ಶೈಲಿಯ ದೇವಾಲಯವಾಗಿದ್ದರೆ ಮಲ್ಲೇಶ್ವರ ದೇವಾಲಯವು ತ್ರಿಕೂಟ ಶೈಲಿಯ ದೇವಾಲಯವಾಗಿದೆ. ಕೇವಲ ನೂರು ಮೀಟರುಗಳ ಅಂತರದಲ್ಲಿ ಎರಡು ಶೈಲಿಯ ದೇವಾಲಯಗಳು ಕಾಣಿಸುವುದು ಬಹಳ ಅಪರೂಪವಾಗಿದೆ. ಕಲ್ಲೇಶ್ವರ ದೇವಾಲಯದಂತೆಯೇ ಮಲ್ಲೇಶ್ವರ ದೇವಾಲಯವೂ ಸಹ ಬಹಳ ದುಸ್ಥಿತಿಯಲ್ಲಿದ್ದು ಇನ್ನು ಕೆಲವೇ ವರ್ಷಗಳಲ್ಲಿ ನಾಮಾವಶೇಷವಾಗಲಿದೆ.
    ಮಲ್ಲೇಶ್ವರ ದೇವಾಲಯವು ಹಲವು ವಿಶೇಷತೆಗಳನ್ನೊಳಗೊಂಡಿದೆ. ಕಲ್ಲೇಶ್ವರ ದೇವಾಲಯವು ಪೂರ್ವಾಭಿಮುಖವಾಗಿ ನಿರ್ಮಾಣಗೊಂಡಿದ್ದರೆ ಮಲ್ಲೇಶ್ವರ ದೇವಾಲಯವು ಉತ್ತರಾಭಿಮುಖವಾಗಿ ನಿರ್ಮಾಣಗೊಂಡಿದೆ. ಈ ದೇವಾಲಯವು ಒಂದು ಮುಖ್ಯ ಗರ್ಭಗುಡಿ, ಅದರ ಮುಂದೆ ಶುಕನಾಸ, ನವರಂಗ, ನವರಂಗಕ್ಕೆ ಹೊಂದಿಕೊಂಡಂತೆ ಶುಕನಾಸ ಮತ್ತು ಪ್ರವೇಶದ್ವಾರ ರಹಿತವಾದ ಮತ್ತೆರಡು ತೆರೆದ ಗರ್ಭಗುಡಿಗಳನ್ನೊಳಗೊಂಡಿದೆ.
    ಮಲ್ಲೇಶ್ವರ ದೇವಾಲಯಕ್ಕೆ ಮೂಲದಲ್ಲಿ ನಕ್ಷತ್ರಾಕಾರದ ಜಗತಿ ನಿರ್ಮಾಣವಾಗಿದ್ದು ಈಗ ಅದು ಮಣ್ಣಿನಲ್ಲಿ ಮುಚ್ಚಿಹೋಗಿದೆ. ಜಗತಿಯ ಅಂಚುಗಳು ಮಾತ್ರ ಅಲ್ಲಲ್ಲಿ ಕಾಣುತ್ತವೆ. ದೇವಾಲಯ ಪ್ರವೇಶಿಸಲು ಹಿಂದೊಮ್ಮೆ ಮೆಟ್ಟಿಲುಗಳಿದ್ದು ಈಗ ಅವು ನಾಶವಾಗಿವೆ. ಈ ಜಗತಿಯ ಮೇಲೆ ದೇವಾಲಯ ನಿರ್ಮಾಣವಾಗಿದ್ದು ಮುಖ್ಯ ಗರ್ಭಗುಡಿ ಉತ್ತರಾಭಿಮುಖವಾಗಿ ಮತ್ತು ಬಲ ಮತ್ತು ಎಡ ಗರ್ಭಗುಡಿಗಳು ಅನುಕ್ರಮವಾಗಿ ಪುರ್ವಾಭಿಮುಖ ಮತ್ತು ಪಶ್ಚಿಮಾಭಿಮುಖವಾಗಿವೆ.
    ಮುಖ್ಯ ಗರ್ಭಗುಡಿಯಲ್ಲಿ ಐದು ಅಡಿ ಎತ್ತರದ ಮಲ್ಲೇಶ್ವರ ಲಿಂಗವಿದೆ. ಲಿಂಗದ ಮಧ್ಯಭಾಗದಲ್ಲಿ ಬ್ರಹ್ಮಸೂತ್ರವಿದೆ. ಗರ್ಭಗುಡಿ ಮತ್ತು ಶುಕನಾಸದ ಪ್ರವೇಶದ್ವಾರಗಳ ಕೆತ್ತನೆಗಳು ಸರಳವಾಗಿವೆ. ಗರ್ಭಗುಡಿಗೆ ಎದುರಾಗಿ ನವರಂಗದಲ್ಲಿ ಬಳಪದ ಕಲ್ಲಿನ ನಂದಿ ಮೂರ್ತಿಯಿದೆ. ನಂದಿ ಮೂರ್ತಿಯ ಮೈಮೇಲಿನ ಘಂಟಾಸರಗಳು ಸುಂದರವಾಗಿವೆ. ನವರಂಗದ ನಾಲ್ಕು ಕಂಬಗಳು ಸಹ ಸರಳ ಶೈಲಿಯಲ್ಲಿದ್ದು ಕೆಳಭಾಗ ಚೌಕಾಕಾರವಾಗಿದ್ದರೆ ಅದರ ಮೇಲಿನ ದಿಂಡು ವೃತ್ತಾಕಾರವಾಗಿದೆ. ನವರಂಗದ ಛಾವಣಿಯಲ್ಲಿ ಪದ್ಮ ಮಂಡಲದ ವಿತಾನಗಳಿವೆ.
    ನವರಂಗಕ್ಕೆ ಹೊಂದಿಕೊಂಡಂತೆ ಬಲಬದಿಯಲ್ಲಿರುವ ಗರ್ಭಗುಡಿ ಖಾಲಿಯಿದೆ. ಇಲ್ಲಿ ಹಿಂದೊಮ್ಮೆ ಯಾವ ಮೂರ್ತಿಯಿದ್ದಿರಬಹುದು ತಿಳಿಯದಾಗಿದೆ. ಬಹುಶಃ ಸೂರ್ಯ ಅಥವಾ ಕಾಲಭೈರವನ ಮೂರ್ತಿಯಿದ್ದಿರಬಹುದೆಂದು ಊಹಿಸಬಹುದು. ನವರಂಗದ ಎಡ ಭಾಗಕ್ಕೆ ಇರುವ ಗರ್ಭಗುಡಿ ಸಹ ಮೂರ್ತಿರಹಿತವಾಗಿದ್ದು ಅದರ ಹಿಂಭಾಗದ ಕಲ್ಲುಗಳೆಲ್ಲ ಬಿದ್ದುಹೋಗಿ ಹೊರಭಾಗಕ್ಕೆ ತೆರೆದುಕೊಂಡಿದೆ. ಗ್ರಾಮದ ಮಧ್ಯದಲ್ಲಿ ಹರಿಹರನ ಮೂರ್ತಿಯೊಂದಿದ್ದು ಅದು ಇದೇ ಗರ್ಭಗುಡಿಯಲ್ಲಿದ್ದಿರಬಹುದಾದ ಸಾಧ್ಯತೆಯಿದೆ.
    ದೇವಾಲಯದ ಹೊರಭಾಗಕ್ಕೆ ಸಾಕಷ್ಟು ಹಾನಿಯಾಗಿದ್ದು ಹೊರಕವಚದ ಕಲ್ಲುಗಳು ಬಹುತೇಕ ಕಡೆ ಬಿದ್ದುಹೋಗಿವೆ. ಇದೊಂದು ಸರಳ ಶೈಲಿಯ ದೇವಾಲಯವಾಗಿದ್ದು ಹೊರಗೋಡೆಗಳ ಮೇಲೆ ಯಾವುದೇ ಕೆತ್ತನೆಗಳು ಕಂಡುಬರುವುದಿಲ್ಲ. ದೇವಾಲಯದ ಮೇಲೆ ಹಿಂದೊಮ್ಮೆ ಇದ್ದಿರಬಹುದಾದ ಶಿಖರಗಳು ಸಂಪೂರ್ಣವಾಗಿ ನಾಶವಾಗಿ ಈಗ ಅಲ್ಲಿ ಬೃಹದಾಕಾರದ ಮರಗಳು ಬೆಳೆದಿವೆ. ಇದೇ ಮರಗಳು ದೇವಾಲಯವನ್ನು ನೆಲಸಮಗೊಳಿಸುವಲ್ಲಿ ಯಾವುದೇ ಅನುಮಾನವಿಲ್ಲ.
    ಮಲ್ಲೇಶ್ವರ ದೇವಾಲಯಕ್ಕೆ ಸದ್ಯ ಯಾವುದೇ ಬಾಗಿಲು ಸಹ ಇಲ್ಲದೆ ರಕ್ಷಣೆಯಿಲ್ಲದಂತಾಗಿದೆ. ಇಲ್ಲಿದ್ದ ಹಲವು ವಿಗ್ರಹಗಳು ಕಳುವಾಗಿರುವ ಸಾಧ್ಯತೆಯೂ ಸಹ ಇದೆ. ದೇವಾಲಯದ ಪ್ರವೇಶಕ್ಕೆ ಒಂದು ಚಿಕ್ಕ ಶಾಸನ ಕಲ್ಲಿದ್ದು ಕ್ರಿ ಶ 1358 ಕ್ಕೆ ಸೇರಿದೆ. ವಿಜಯನಗರ ಸಾಮ್ರಾಜ್ಯದ ಆರಂಭಿಕ ಕಾಲಕ್ಕೆ ಸೇರುವ ಈ ಶಾಸನ ಅರಸ ವೀರಬುಕ್ಕಣನ ಆಳ್ವಿಕೆಯನ್ನು ಉಲ್ಲೇಖಿಸಿದೆ. ದೊಡ್ಡಕಣಗಾಲಿನ ಮೂಲ ಹೆಸರು ಕಣ್ಣಂಗಾಲ ಎಂಬುದು ಈ ಶಾಸನದಿಂದ ತಿಳಿದುಬರುತ್ತದೆ. ಗಜಬೇಂಟೆಕಾರ ಎಂಬ ಬಿರುದು ಪಡೆದಿದ್ದ ಮಾದೆಯನಾಯಕರ ಮಗನಾಗಿದ್ದ ಹರುಪೆಯನಾಯಕರು ಕಣ್ಣಂಗಾಲದ ಪ್ರಭುದೇವರಿಗೆ ಶಾಶ್ವತ ಅಮೃತಪಡಿ ಮತ್ತು ನೈವೇದ್ಯಕ್ಕಾಗಿ ಗ್ರಾಮದ ಸುತ್ತಮುತ್ತಲಿನ ಹಲವು ಭೂಮಿಯನ್ನು ದಾನ ಕೊಟ್ಟ ಬಗ್ಗೆ ಈ ಶಾಸನ ತಿಳಿಸುತ್ತದೆ. ಈ ದಾನವನ್ನು ಅಪಹರಿಸಿದವರಿಗೆ ಗಂಗೆಯ ತೀರದಲ್ಲಿ ತಂದೆ, ತಾಯಿ, ಸಹೋದರರು ಮತ್ತು ಮಕ್ಕಳನ್ನು ಕೊಂದು ಅವರ ಮಾಂಸಭಕ್ಷಣೆ ಮಾಡಿ ಅವರ ರಕ್ತವನ್ನು ಕುಡಿದಂತಹ ಪಾಪ ತಟ್ಟಲಿ ಎಂಬ ಉಗ್ರವಾದ ಶಾಪಾಶಯ ಈ ಶಾಸನದ ಕೊನೆಯಲ್ಲಿದೆ. ವಿಶೇಷವೆಂದರೆ ಶಾಸನದ ಕೊನೆಯ ಸಾಲಿನಲ್ಲಿ ಮಲ್ಲಿನಾಥಾಯ ನಮಃ ಎಂದಿದ್ದು ಈ ದೇವಾಲಯದ ಮೂಲ ದೇವರ ಹೆಸರು ಮಲ್ಲಿನಾಥ ಎಂಬುದಾಗಿ ತಿಳಿಯುತ್ತದೆ. ನಂತರ ಅದೇ ಮಲ್ಲೇಶ್ವರ ಆಯಿತೆಂದು ಊಹಿಸಬಹುದು. ಆದರೆ ಶಾಸನದಲ್ಲಿನ ಪ್ರಭುದೇವ ಎಲ್ಲಿಯ ದೇವರು ಎಂಬುದು ತಿಳಿಯದಾಗಿದೆ.

ความคิดเห็น • 4