ಕಾಲನ ಹೊಡೆತಕ್ಕೆ ಸಿಕ್ಕಿ ನಲುಗಿರುವ ಮಚ್ಚೇರಿ ಕಲ್ಲೇಶ್ವರ ದೇಗುಲ Maccheri Kalleshwara temple in ruins

แชร์
ฝัง
  • เผยแพร่เมื่อ 8 ต.ค. 2024
  • #justkannadiga #incredibleindia #karnatakahistoricalplaces
    ಚಿಕ್ಕಮಗಳೂರು ಜಿಲ್ಲೆಯಲ್ಲಿ ಅತಿ ಹೆಚ್ಚಿನ ಹೊಯ್ಸಳ ದೇವಾಲಯಗಳು ದಾಖಲಾಗಿರುವುದು ಕಡೂರು ತಾಲೂಕಿನಲ್ಲಿ. ಹೊಯ್ಸಳರ ಕಾಲಕ್ಕೆ ಮಲೆನಾಡು ಮತ್ತು ಬಯಲುಸೀಮೆಗೆ ಕೊಂಡಿಯಾಗಿದ್ದ ಇಲ್ಲಿ ಸ್ವಾಭಾವಿಕವಾಗಿಯೇ ಧಾರ್ಮಿಕ ಮತ್ತು ಸಾಂಸೃತಿಕ ಚಟುವಟಿಕೆಗಳು ಅಧಿಕವಾಗಿದ್ದು ಹಲವಾರು ದೇವಾಲಯಗಳು ನಿರ್ಮಾಣವಾದವು.
    ಕಡೂರು - ಹುಳಿಯಾರು ಮಾರ್ಗದಲ್ಲಿರುವ ಮಚ್ಚೇರಿ ಗ್ರಾಮವು ಕಡೂರಿನಿಂದ ಕೇವಲ ನಾಲ್ಕು ಕಿ ಮೀ ದೂರದಲ್ಲಿದೆ. ಹೊಯ್ಸಳರ ಕಾಲಕ್ಕೆ ಒಂದು ದೊಡ್ಡ ಅಗ್ರಹಾರವಾಗಿದ್ದ ಇಲ್ಲಿ ಯೋಗನರಸಿಂಹ , ಕಲ್ಲೇಶ್ವರ, ಮಾಚೇಶ್ವರ, ಮಾಧವ .........ದೇವಾಲಯಗಳು ನಿರ್ಮಾಣವಾದವು. ಇದರೊಟ್ಟಿಗೆ ಮಚ್ಚೇರಿ ಗ್ರಾಮವು ಒಂದು ಪ್ರಸಿದ್ಧ ಜೈನ ಕ್ಷೇತ್ರವೂ ಸಹ ಆಗಿತ್ತೆಂದು 2022 ರಲ್ಲಿ ದೊರಕಿದ ಪಾರ್ಶ್ವನಾಥ ಮೂರ್ತಿಯಿಂದ ತಿಳಿಯಿತು.
    ಇಂದಿನ ಮಚ್ಚೇರಿ ಗ್ರಾಮವು ಪುರಾಣ ಪುರುಷ ವಿರಾಟರಾಯನ ರಾಜಧಾನಿಯಾಗಿದ್ದ ಮತ್ಸ್ಯನಗರಿಯಾಗಿತ್ತೆಂದು ಇಲ್ಲಿನ ಸ್ಥಳಪುರಾಣ ತಿಳಿಸುತ್ತದೆ. ಹೊಯ್ಸಳ ಮತ್ತು ಅದಕ್ಕೂ ಪೂರ್ವದಲ್ಲೇ ಈ ಗ್ರಾಮವು ಒಂದು ಅಗ್ರಹಾರವಾಗಿದ್ದುದಾಗಿ ತಿಳಿಯುತ್ತದೆ. ಹೊಯ್ಸಳರ ಕಾಲಕ್ಕೆ ಪ್ರವರ್ಧಮಾನಕ್ಕೆ ಬಂದ ಈ ಗ್ರಾಮದಲ್ಲಿ ಇಂದು ಗ್ರಾಮದ ಮಧ್ಯೆ ಯೋಗನರಸಿಂಹ ದೇವಾಲಯವಿದ್ದರೆ ಈಶಾನ್ಯ ದಿಕ್ಕಿನಲ್ಲಿ ಊರ ಹೊರಗಿನ ತೆಂಗು ಅಡಿಕೆ ತೋಟಗಳ ಮಧ್ಯೆ ಪಾಳುಬಿದ್ದ ಕಲ್ಲೇಶ್ವರ ದೇವಾಲಯವಿದೆ.
    ಪ್ರಾಚೀನ ಕಾಲದ ಅಗ್ರಹಾರದ ರಚನೆಯಂತೆ ಗ್ರಾಮದ ಈಶಾನ್ಯ ದಿಕ್ಕಿನಲ್ಲಿರುವ ಕಲ್ಲೇಶ್ವರ ದೇವಾಲಯವು ಸರಿಯಾದ ಪೋಷಣೆ, ನಿರ್ವಹಣೆ, ಪೂಜಾಧಿಗಳು ಇಲ್ಲದೆ ಇಂದು ಬಾವಲಿಗಳ ಗೂಡಾಗಿದೆ. ದೇವಾಲಯದ ಹೊರಗೆಲ್ಲ ಗಿಡಗಂಟಿಗಳು, ಪೊದೆಗಳು ಬೆಳೆದು ಧೈರ್ಯವಿದ್ದವರು ಮಾತ್ರ ಒಳಗೆ ಹೋಗಬಹುದು ಎಂಬ ಸ್ಥಿತಿಯಲ್ಲಿದೆ. ಸ್ಥಳೀಯವಾಗಿ ಈ ದೇವಾಲಯವನ್ನು ವಜ್ರಲಿಂಗೇಶ್ವರ ಎಂದು ಕರೆಯುವರು.
    ಕಲ್ಲೇಶ್ವರ ದೇವಾಲಯಕ್ಕೆ ಮುಖ್ಯವಾಗಿ ಗರ್ಭಗುಡಿ, ಮುಖ್ಯ ಗರ್ಭಗುಡಿಯ ಮುಂದೆ ಮಾತ್ರ ಶುಕನಾಸ, ಶುಕನಾಸದ ಮುಂಭಾಗಕ್ಕೆ ಸಾಧಾರಣ ಶೈಲಿಯ ಕಂಬಗಳನ್ನೊಳಗೊಂಡ ತೆರೆದ ನವರಂಗ ಮಂಟಪ, ಈ ನವರಂಗ ಮಂಟಪಕ್ಕೆ ಹೊಂದಿಕೊಂಡಂತೆ ಮತ್ತೆರಡು ಗರ್ಭಗುಡಿಗಳು ಮತ್ತು ಸುಂದರವಾದ ಹೊಯ್ಸಳ ಶೈಲಿಯ ಕಂಬಗಳನ್ನೊಳಗೊಂಡ ಮತ್ತೊಂದು ನವರಂಗ ಮಂಟಪವಿದೆ. ವಿಶೇಷವೆಂದರೆ ಈ ನವರಂಗ ಭಾಗಕ್ಕೆ ಉತ್ತರ ಮತ್ತು ದಕ್ಷಿಣ ದಿಕ್ಕುಗಳಿಂದ ಪ್ರವೇಶವನ್ನು ಕಲ್ಪಿಸಲಾಗಿದೆ. ಆದರೆ ನಂತರದ ಕಾಲಕ್ಕೆ ಗರ್ಭಗುಡಿಗೆ ನೇರವಾಗಿ ಪೂರ್ವ ದಿಕ್ಕಿನಲ್ಲಿದ್ದ ಗೋಡೆಯ ಕಲ್ಲುಗಳನ್ನು ತೆಗೆದು ಆ ದಿಕ್ಕಿನಿಂದಲೂ ಒಂದು ಪ್ರವೇಶವನ್ನು ಕಲ್ಪಿಸಲಾಗಿದೆ. ಹಿಂದೊಮ್ಮೆ ಇಲ್ಲಿದ್ದ ಸಣ್ಣ ಕಿಂಡಿಯೊಂದರಿಂದ ಬರುತ್ತಿದ್ದ ಸೂರ್ಯರಶ್ಮಿಯು ನೇರವಾಗಿ ಗರ್ಭಗುಡಿಯ ಶಿವಲಿಂಗದ ಮೇಲೆ ಬೀಳುತ್ತಿದ್ದು ಆದರೆ ಈಗ ಆ ವಿಸ್ಮಯ ಮರೆಯಾಗಿದೆ.
    ದೇವಾಲಯದ ನವರಂಗ ಭಾಗದಲ್ಲಿ ಒಂದು ದೊಡ್ಡ ಮತ್ತು ಚಿಕ್ಕ ಗಾತ್ರದ ನಂದಿ ಮೂರ್ತಿಗಳನ್ನು ಇಡಲಾಗಿದೆ. ನವರಂಗದ ಛಾವಣಿಯಲ್ಲಿ ಪದ್ಮ ಮಂಡಲದ ವಿತಾನಗಳಿವೆ. ಉಳಿದಂತೆ ಒಳಭಾಗದಲ್ಲಿ ಸೂಕ್ಷ್ಮ ಕೆತ್ತನೆಗಳಿಂದ ಕೂಡಿದ ಬೇರೆ ಯಾವುದೇ ಕೆತ್ತನೆಗಳು ಇಲ್ಲ. ಗರ್ಭಗುಡಿಯಲ್ಲಿ ಎರಡು ಅಡಿ ಎತ್ತರದ ಪಾಣಿಪೀಠದ ಮೇಲೆ ವೃತ್ತಾಕಾರದ ಯೋನಿಪೀಠವಿದೆ. ಅದರ ಮೇಲೆ ಒಂದು ಅಡಿ ಎತ್ತರದ ಲಿಂಗವಿದೆ. ಮಿಕ್ಕೆರಡು ಗರ್ಭಗುಡಿಗಳಲ್ಲಿ ಇದ್ದ ಮೂಲ ಮೂರ್ತಿಗಳು (ಮಾಚೇಶ್ವರ ಮತ್ತು ಮಾಧವದೇವ) ಕಾಣೆಯಾಗಿವೆ. ಸದ್ಯ ಇದರಲ್ಲಿ ಗಣಪತಿ ಮತ್ತು ಸುಬ್ರಹ್ಮಣ್ಯನ ಮೂರ್ತಿಗಳನ್ನು ಇಡಲಾಗಿದೆ. ದುರದೃಷ್ಟಕರ ಸಂಗತಿಯೆಂದರೆ ದೇವಾಲಯದ ಒಳಭಾಗ ಮತ್ತು ಇಲ್ಲಿನ ಎಲ್ಲಾ ಮೂರ್ತಿಗಳು ಪೂರ್ತಿಯಾಗಿ ಬಾವಲಿಗಳ ಉಚ್ಚಿಷ್ಠಗಳಿಂದ ತುಂಬಿ ದುರ್ವಾಸನೆಯಿಂದ ಕೂಡಿದೆ.
    ದೇವಾಲಯದ ಉತ್ತರ ಮತ್ತು ದಕ್ಷಿಣ ಪ್ರವೇಶಕ್ಕೆ ಮುಖಮಂಟಪವಿದೆ. ಎರಡು ಸಾಧಾರಣ ಕಂಬಗಳಿಂದ ಕೂಡಿದ ಮುಖಮಂಟಪಕ್ಕೆ ಸುತ್ತಲೂ ಕಕ್ಷಾಸನವಿದೆ. ಇಲ್ಲಿನ ದ್ವಾರದ ಬಳಿ ಮಹಿಷಾಸುರಮರ್ದಿನಿಯ ವಿಗ್ರವೊಂದರ ಮುರಿದ ಶಿಲ್ಪವಿದೆ. ದೇವಾಲಯದ ಹೊರಗೋಡೆಗಳು ಸಾಧಾರಣವಾಗಿದ್ದು ಯಾವುದೇ ಕೆತ್ತನೆಗಳು ಕಾಣುವುದಿಲ್ಲ. ದೇವಾಲಯದ ಮೇಲಿನ ಶಿಖರವು ನಾಶವಾಗಿದ್ದು ಈಗ ದಟ್ಟವಾಗಿ ಪೊದೆಗಳು ಬೆಳೆದಿವೆ.
    ದೇವಾಲಯದಲ್ಲಿ ಎರಡು ಶಾಸನಗಳಿದ್ದು ಇವೆರಡೂ ಸಹ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಶಾಸನ ಸಂಪುಟದಲ್ಲಿ ಪ್ರಕಟವಾಗಿವೆ.
    ಮೊದಲನೇ ಶಾಸನವನ್ನು ದೇವಾಲಯದ ಒಳಗಿನ ಗೋಡೆಗೆ ಒರಗಿಸಿ ಇಡಲಾಗಿದೆ. ಹಿಂದೊಮ್ಮೆ ಬಿದ್ದು ಒಡೆದುಹೋಗಿದ್ದ ಶಾಸನವನ್ನು ತಾತ್ಕಾಲಿಕವಾಗಿ ಜೋಡಿಸಲಾಗಿದೆ. ಈ ಶಾಸನವು ಮೂರು ಭಾಗಗಳಲ್ಲಿ ಬರಹವನ್ನೊಳಗೊಂಡಿದೆ.
    ೧. ಮೊದಲನೇ ಬರಹವು 12 ನೇ ಶತಮಾನಕ್ಕೆ ಸೇರಿದ್ದು ಕಲ್ಲೇಶ್ವರ ದೇವಾಲಯದ ನಿರ್ಮಾಣಕ್ಕೆ ಸಂಭಂಧಿಸಿದ್ದಾಗಿದೆ. ಪ್ರಸಿದ್ಧ ಕಾಳಾಮುಖ ಯತಿಗಳಾದ ರತ್ನಶಿವಯೋಗಿಗಳ ಶಿಷ್ಯರಾಗಿದ್ದ ಅನಂತಶಿವ ಮುನಿಯು ಮಚ್ಚೇರಿ ಗ್ರಾಮದಲ್ಲಿ ದೇವಾಲಯವನ್ನು ನಿರ್ಮಿಸಿ ಕಲಿದೇವ, ಮಚ್ಚೇಶ್ವರ ಮತ್ತು ಮಾಧವದೇವನನ್ನು ಪ್ರತಿಷ್ಠಾಪಿಸಿದ್ದಾಗಿ ತಿಳಿಸುತ್ತದೆ. ದೇವಾಲಯದ ಸುತ್ತಲೂ ಸ್ವರ್ಗದ ಉದ್ಯಾನವನವನ್ನು ಹೋಲುವ ಒಂದು ತೋಟವನ್ನು ಕೂಡ ಮಾಡಿಸಿದ್ದಾಗಿ ತಿಳಿಯುತ್ತದೆ. ದೇವಾಲಯದ ನಿರ್ವಹಣೆಗಾಗಿ ಹಲವು ಅಳತೆಯ ಭೂಮಿಯನ್ನು ಸಹ ಕೊಟ್ಟ ಬಗ್ಗೆ ಈ ಶಾಸನದಲ್ಲಿ ಮಾಹಿತಿಯಿದೆ.
    ಇದೇ ಶಾಸನದ ಮತ್ತೊಂದು ಬರಹವು ಹೊಯ್ಸಳ ವಿಷ್ಣುವರ್ಧನನ ಆಳ್ವಿಕೆಗೆ ಸೇರಿದ್ದು ಮಚ್ಚೇರಿಯ ಮಾಳಗವುಡನು ಕಲಿದೇವನ ದೇವಾಲಯದ ನಿರ್ವಹಣೆಗಾಗಿ ಒಣ ಮತ್ತು ನೀರಾವರಿ ಭೂಮಿ, ಸಾವಿರ ವೀಳ್ಯದೆಲೆ ಬಳ್ಳಿಗಳಿದ್ದ ಒಂದು ತೋಟ, ದೇವಾಲಯದ ನಂದಾದೀಪಕ್ಕಾಗಿ ಒಂದು ಗಾಣ, ಹತ್ತು ನಿವೇಶನಗಳನ್ನು ಕಾಳಾಮುಖ ಯತಿಯಾಗಿದ್ದ ರತ್ನಶಿವಪಂಡಿತನಿಗೆ ದಾನ ಕೊಟ್ಟಿದ್ದಾಗಿ ತಿಳಿಸುತ್ತದೆ. ಈ ಶಾಸನವು ವಿಷ್ಣುವರ್ಧನನ ಪರಾಕ್ರಮ, ಬಿರುದು ಬಾವಲಿಗಳನ್ನು ಬಹಳ ವಿಶೇಷವಾಗಿ ವರ್ಣಿಸಿದೆ.
    ಇದೇ ಶಾಸನದ ಇನ್ನೊಂದು ಬದಿಯಲ್ಲಿರುವ ಶಾಸನ ಕ್ರಿ ಶ 1235 ಕ್ಕೆ ಸೇರಿದೆ. ಇದು ಹೊಯ್ಸಳ ಎರಡನೇ ನರಸಿಂಹನ ಕಾಲಕ್ಕೆ ಸೇರಿದೆ (ವಿಷ್ಣುವರ್ಧನನ ಮರಿ ಮೊಮ್ಮಗ). ಮಚ್ಚೇರಿಯ ಮಾಚಗವುಡನ ಮಗ ಕಾಮಗಾವುಡನು, ಕಮ್ಮಾರ ಮತ್ತು ಮುಂತಾದ ಹಲವರು ಮಚ್ಚೇರಿಯ ಕಲಿದೇವರಿಗೆ ಯಾವುದೋ ದಾನವನ್ನು ಕೊಟ್ಟಂತೆ ತಿಳಿಸುತ್ತದೆ.
    ಇದಿಷ್ಟೂ ಮಾಹಿತಿಯು ಒಂದೇ ಕಲ್ಲಿನಲ್ಲಿ ಕೆತ್ತಿದ್ದಾದರೆ ನವರಂಗ ಭಾಗದ ಮತ್ತೊಂದು ಶಾಸನದಲ್ಲಿ ಕಾವಿಸೆಟ್ಟಿ, ಮಾಚಿಸೆಟ್ಟಿ, ಬಲ್ಲಿಸೆಟ್ಟಿ, ಕೇತಿಸೆಟ್ಟಿ ಮತ್ತು ಬಿಟ್ಟಿಸೆಟ್ಟಿಯರು ಮಚ್ಚೇರಿಯ ಕಲಿದೇವರ ನಂದಾದೀಪಕ್ಕೆ ದಾನವನ್ನು ಕೊಟ್ಟಿದ್ದಾಗಿ ತಿಳಿಸುತ್ತದೆ.
    900 ವರ್ಷಗಳ ಹಿಂದಿನ ದೇವಾಲಯವೊಂದು ಇಂದಿಗೆ ಬಾವಲಿಗಳ ಗೂಡಾಗಿ ಮಾರ್ಪಾಡಾಗಿದ್ದು ಬಹಳ ಬೇಸರವಾಗುತ್ತದೆ. ಮಚ್ಚೇರಿಯ ಯುವಕರ ತಂಡವು ಆಗಾಗ ಇಲ್ಲಿನ ಗಿಡಗಂಟಿಗಳನ್ನು ತೆರವು ಮಾಡುತ್ತಿರುತ್ತದೆ. ಆದರೆ ಮಳೆ ಬಂದಾಗ ಮತ್ತೆ ಪೊದೆಗಳು ಬೆಳೆದು ಯಥಾಸ್ಥಿತಿಗೆ ಬರುತ್ತದೆ. ಕಡೂರಿಗೆ ಇಷ್ಟೊಂದು ಹತ್ತಿರವಿದ್ದರೂ ಸಹ ಇಂತಹ ಒಂದು ದೇವಾಲಯವು ಇದೇ ಸ್ಥಿತಿಯಲ್ಲಿರುವುದು ಖಂಡನೀಯವೇ ಸರಿ. ಇನ್ನಾದರೂ ಸ್ಥಳೀಯ ಇಲಾಖೆಗಳು, ಗ್ರಾಮಸ್ಥರು ದೇವಾಲಯವನ್ನು ಸ್ವಚ್ಛಗೊಳಿಸಿ, ಬಾವಲಿಮುಕ್ತಗೊಳಿಸಬೇಕಾಗಿದೆ.

ความคิดเห็น • 5